ಷಡಕ್ಷರದೇವ
	ಸು. 1655. ಪ್ರಸಿದ್ಧ ವೀರಶೈವ ಕವಿ. ರಾಜಶೇಖರ ವಿಳಾಸ, ಶಬರಶಂಕರವಿಳಾಸ, ಬಸವರಾಜವಿಜಯ ಎಂಬ ಮೂರು ಚಂಪೂಕೃತಿಗಳನ್ನು ಕನ್ನಡದಲ್ಲೂ ಕವಿಕರ್ಣರಸಾಯನ ಎಂಬ ಗ್ರಂಥವನ್ನು ಸಂಸ್ಕøತದಲ್ಲೂ ರಚಿಸಿದ್ದಾನೆ. ಈ ಪ್ರಸಿದ್ಧ ಗ್ರಂಥಗಳಲ್ಲದೆ ಸು. 18 ಕೃತಿಗಳನ್ನು ಈತ ಕನ್ನಡ ಮತ್ತು ಸಂಸ್ಕøತದಲ್ಲಿ ರಚಿಸಿದ್ದಾನೆ.  ಮಳವಳ್ಳಿ ತಾಲ್ಲೂಕಿನ ದನುಗೂರು ಇವನ ಜನ್ಮಸ್ಥಳ. ಚಿಕ್ಕವೀರದೇಶಿಕ ಈತನ ಗುರು. ಕವಿಯ ವಿದ್ಯಾಭ್ಯಾಸ ಹಾಗೂ ಕಾವ್ಯರಚನಾಕ್ಷೇತ್ರ ಯಳಂದೂರು. ಈತ ಚಿಕ್ಕದೇವರಾಜನ ತಾಯಿ ಅಮೃತಾಂಬೆಯ ತವರುಮನೆಗೆ ಕುಲಗುರುವಾಗಿದ್ದ. ಚಿಕ್ಕದೇವರಾಜ, ತಿರುಮಲಾರ್ಯ, ವಿಶಾಲಾಕ್ಷಪಂಡಿತ ಇವರು ಈತನ ಸಮಕಾಲೀನರೂ ಸಹಪಾಠಿಗಳೂ ಆಗಿದ್ದರು. ಪೂರ್ವ ಕವಿಗಳಲ್ಲಿ ಹರಿಹರ, ರಾಘವಾಂಕ, ಭೀಮಕವಿ, ಕೆರೆಯಪದ್ಮರಸ, ಕೇಶಿರಾಜ, ಪಾಲ್ಕುರಿಕೆ ಸೋಮನಾಥ ಮೊದಲಾದವರನ್ನು ಸ್ಮರಿಸಿದ್ದಾನೆ.  ಇವನಿಗೆ ಉಭಯಕವಿತಾವಿಶಾರದ ಎಂಬ ಬಿರುದಿದ್ದಂತೆ ತಿಳಿಯುತ್ತದೆ.  ಈತ ದನುಗೂರು ಮಠದ ಸ್ವಾಮಿಯೂ ಆಗಿದ್ದ. ಈತನ ಸಮಾಧಿ ಯಳಂದೂರಿನಲ್ಲಿದೆ.

	ರಾಜಶೇಖರವಿಳಾಸ ಷಡಕ್ಷರದೇವನ ಚೊಚ್ಚಲ ಕೃತಿ. ಇದರಲ್ಲಿ 14 ಆಶ್ವಾಸಗಳೂ 10,861 ಪದ್ಯಗಳೂ ಇವೆ. ಗುಬ್ಬಿಯ ಮಲ್ಲಣಾರ್ಯನ ಭಾವಚಿಂತಾರತ್ನ ಈ ಕಾವ್ಯಕ್ಕೆ ಆಕರ. ಶೃಂಗಾರ, ಕರುಣ ಹಾಗೂ ಭಕ್ತಿ ಇಲ್ಲಿಯ ಮುಖ್ಯ ರಸಗಳು. ಕಾವ್ಯದ 11 ಮತ್ತು 12ನೆಯ ಆಶ್ವಾಸಗಳು ಶೃಂಗಾರರಸದಿಂದ ತುಂಬಿಹೋಗಿವೆ. ತಿರುಕೊಳವಿನಾಚಿಯ ಪ್ರಲಾಪ ಪ್ರಸಂಗಗಳಲ್ಲಿ ಕರುಣರಸ ಮಡುಗಟ್ಟಿದೆ. ಇಡೀ ಕಾವ್ಯದಲ್ಲಿ ಈ ಪ್ರಸಂಗ ಒಂದು ಮಹತ್ತ್ವದ ಘಟ್ಟ.

	ಬಸವರಾಜವಿಜಯದಲ್ಲಿ 42 ಆಶ್ವಾಸಗಳೂ ಸು. 3,500ಕ್ಕೂ ಮೇಲ್ಪಟ್ಟು ಪದ್ಯಗಳೂ ಇವೆ. ಇದಕ್ಕೆ ವೃಷಭೇಂದ್ರವಿಜಯ ಎಂಬ ಹೆಸರೂ ಇದೆ. ಈ ಕಾವ್ಯದಲ್ಲಿ ಬಸವಣ್ಣನ ಜೀವನಚರಿತ್ರೆ ನಿರೂಪಿತ ವಾಗಿದೆ. ಜೊತೆಗೆ ಸು. 80 ಜನ ಶಿವಶರಣರ ಕಥೆಗಳೂ ಬಂದಿವೆ. ಈ ದೃಷ್ಟಿಯಿಂದ ಇದನ್ನು ಶರಣರ ಬೃಹತ್ಕಥಾಕಾವ್ಯಮಂಜರಿ ಎಂದು ಕರೆಯಬಹುದು.

	ಶಬರಶಂಕರವಿಳಾಸ 5 ಆಶ್ವಾಸ ಹಾಗೂ 467 ಪದ್ಯಗಳನ್ನುಳ್ಳ ಖಂಡಕಾವ್ಯ. ಇದರಲ್ಲಿ ಶಿವನ 15ನೆಯ ಲೀಲೆಯಾದ ಕಿರಾತಲೀಲೆಯನ್ನು ವರ್ಣಿಸಿದೆ.

	ಕವಿಕರ್ಣರಸಾಯನ ಸಂಸ್ಕøತ ಕೃತಿಗಳಲ್ಲಿ ಪ್ರಮುಖವಾದದ್ದು. ಇದರಲ್ಲಿ 14 ಸರ್ಗಗಳಿವೆ (ನಾಲ್ಕು ಸರ್ಗಗಳು ಮಾತ್ರ ಅಚ್ಚಾಗಿವೆ). ತಮಿಳುನಾಡಿನ ಸೌಂದರಚೋಳನ ಕಥೆ ಇಲ್ಲಿನ ಕಥಾವಸ್ತು. ಕವಿ ತಾನು ಇದನ್ನು ಹರಿ ಹರನುದಿತಮಾರ್ಗದಿಂದ ರಚಿಸಿದುದಾಗಿ ಹೇಳಿ ಕೊಂಡಿದ್ದಾನೆ. ಈ ಕಾವ್ಯ ಶ್ರೀಹರ್ಷನ ನೈಷಧೀಯಚರಿತೆಗೆ ಸರಿದೊರೆಯಾಗಿ ನಿಲ್ಲುವ ಕಾವ್ಯಗುಣ ದಿಂದ ಕೂಡಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

	ಶಿವಸ್ತೋತ್ರಮಂಜರಿ, ಶಿವಸ್ತವಮಂಜರಿ (101 ವೃತ್ತ) ನಮಃ ಶಿವಾ ಯಾಷ್ಟಕ, ಶ್ರೀಮದನಾದಿಸಿದ್ಧಲಿಂಗಸ್ತವನ, ವೀರಭದ್ರೋದಾಹರಣ ಗದ್ಯ, ವೀರಭದ್ರ ದಂಡಕ, ಇಂದುಧರ ಸ್ತೋತ್ರ, ಇಷ್ಟಲಿಂಗ ಸ್ತವನ - ಇವು ಇವನ ಇತರ ಸಂಸ್ಕøತ ಗ್ರಂಥಗಳು. ಷಡಕ್ಷರ ಮಂತ್ರಸ್ತೋತ್ರ, ಬಸವಾಷ್ಟಕ, ನೀಲಾಂಬಿಕಾ ಸ್ತೋತ್ರ, ತತ್ತ್ವತ್ರಯ ಮಂಜರಿ, ಶಿವಾಧಿಕ್ಯ ರತ್ನಾವಳಿ, ಭಕ್ತಾಧಿಕ್ಯ ರತ್ನಾವಳಿ, ಮಂಗಲಾಷ್ಟಕ, ಲಿಂಗಾಷ್ಟಕ, ಮಾತಿನ ಮಾಲಿಕೆ, ತೋಂಟದಾರ್ಯಸ್ತವನ-ಇವು ಇವನ ಇತರ ಕನ್ನಡ ಗ್ರಂಥಗಳು.

	ರಸಪುಷ್ಟಿಯುಳ್ಳ ಈತನ ಕಾವ್ಯಗಳನ್ನು ಮೆಚ್ಚಿಕೊಂಡ ಸಮಕಾಲೀನ ಪಂಡಿತರು ಈತನ ಕವಿತಾರಚನೆಯನ್ನು ಸಾಕಷ್ಟು ಹೊಗಳಿದ್ದಾರೆ. ಪಂಪನಿಂದ ಆರಂಭವಾದ ಚಂಪೂಯುಗ ಮತ್ತೆ ಕುಡಿಯೊಡೆದು ಚಿಗುರುವಂತಾದದ್ದು ಷಡಕ್ಷರಿಯ ಕಾಲದಲ್ಲಿ. ಅಷ್ಟೇ ಅಲ್ಲ, ಈತ ತನ್ನ ಕಾಲದ ಚಂಪೂಕವಿಗಳಿಗೆ ಮಾರ್ಗದರ್ಶಕನೂ ಆದ. ಇವನಿಂದ ಮುಂದೆ, ಇವನ ಪ್ರಭಾವಕ್ಕೊಳಗಾಗಿ ಅನೇಕ ಕವಿಗಳು ಚಂಪೂಕಾವ್ಯಗಳನ್ನು ರಚಿಸಿದರು. ಈ ದೃಷ್ಟಿಯಿಂದ ಕನ್ನಡಚಂಪೂಮಾರ್ಗವೇತ್ತರಲ್ಲಿ ಪಂಪ ಮೊದಲನೆಯವನಾದರೆ ಷಡಕ್ಷರದೇವ ಕೊನೆಯವನೆನ್ನಬಹುದು.				
			(ವಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ